ಕುವೆಂಪು ರವರ 116ನೇ ಜನ್ಮ ದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ

ಕುವೆಂಪು ರವರ 116ನೇ ಜನ್ಮ ದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ

ಮನುಷ್ಯ ಜಾತಿ ತಾನೊಂದೇ ವಲಂ

ಮನುಜ ಮತ ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ತಮ್ಮ ಕಾಣಿಕೆಯಾಗಿ ಕೊಟ್ಟ ಕುವೆಂಪು, ತಮ್ಮ ಮೇರುಕೃತಿಗಳಿಂದಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದವರು.

ಪ್ರತಿಯೊಂದು ಮಗುವು ಹುಟ್ಟುತ್ತಲೇ ವಿಶ್ವಮಾನವ , ಬೆಳೆಯುತ್ತಾ ಅದನ್ನು ನಾವು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಇದು ರಾಷ್ಟ್ರಕವಿ ಕುವೆಂಪು ಅವರ ಮಹದಾಶಯ. ಅವರ ಸಾರ್ವಕಾಲಿಕ ವಿಶ್ವಮಾನವ ಗೀತೆ ಓ ನನ್ನ ಚೇತನ, ಸಮಾನತೆಯ ಪ್ರಜ್ಞೆಯ ಪ್ರತಿಫಲ.  ಅವರ ಜನ್ಮದಿನೋತ್ಸವದ ಸುಸಂದರ್ಭದಲ್ಲಿ ಅವರಿಗೆ ನಾವು ಸಲ್ಲಿಸಬಹುದಾದ ಸೂಕ್ತ ಗೌರವವೆಂದರೇ, ಅವರು ಪ್ರಪಂಚಕ್ಕೆ ಕೊಡುಗೆಯಾಗಿ ಕೊಟ್ಟ ಸಂದೇಶವನ್ನು ಅಕ್ಷರಶಃ ಪಾಲಿಸುವ ಪ್ರಯತ್ನ ಹಾಗೂ ಅವರ ಉದಾತ್ತ ಚಿಂತನೆಗಳನ್ನು, ತತ್ವ ಸಿದ್ದಾಂತಗಳನ್ನು ಅರಗಿಸಿಕೊಂಡು ಅವನ್ನ ಜೀವನದ ದಾರಿದೀಪಗಳನ್ನಾಗಿ ಮಾಡಿಕೊಳ್ಳುವುದು.

ಪದ್ಮಭೂಷಣ, ಕರ್ನಾಟಕ ರತ್ನ, ವಿಶ್ವಮಾನವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ರವರ 116ನೇ ಜನ್ಮ ದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬೆಂಗಳೂರಿನ ವಿಜಯನಗರ ಶಾಖಾ ಮಠದಲ್ಲಿ ಡಿಸೆಂಬರ್ 29ರಂದು ಸಂಜೆ 7 ಗಂಟೆಗೆ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಸೌಮ್ಯನಾಥ ಸ್ವಾಮೀಜಿ, ಶ್ರೀ ಅನ್ನದಾನನಾಥೇಶ್ವರ ಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಆಯೋಜಿಸಲಾಗಿತ್ತು.

ವೇದ ಘೋಷಗಳೊಂದಿಗೆ ಭವ್ಯ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕ ಬಳಿಕ ನಾರಾಯಣಧಾಮದ ಬ್ರಹ್ಮಚಾರಿ ಸಾಯಿ ಕೀರ್ತಿನಾಥಜೀ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರು. ಖ್ಯಾತ ಗಾಯಕಿ ಡಾ. ಶಮಿತಾ ಮಲ್ನಾಡ್, ಆನಂದ್ ಮಾದಲಗೆರೆ ಅವರು ತಮ್ಮ ಗಾಯನದ ಮೂಲಕ ಕುವೆಂಪುರವರಿಗೆ ಗೀತನಮನವನ್ನು ಸಲ್ಲಿಸಿದ್ದರು. ಕುವೆಂಪು ಅವರ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ವೇದಿಕೆಯಲ್ಲಿ ಸಾಕ್ಷಿಯಾಗಿದ್ದರು. ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದರ ಸಂಕೇತವಾದ ದೀಪವನ್ನು ಬೆಳಗಿಸುವ ಮೂಲಕ ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಬೆಂಗಳೂರಿನ ವಿಜಯ ನಗರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಎಂ.ಕೃಷ್ಣಪ್ಪ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಕುವೆಂಪು ಉದಾತ್ತ ಆಶಯಗಳನ್ನು ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಕುವೆಂಪು ನಾವು ವಿಶ್ವಮಾನವರಾಗಬೇಕೆಂದು ಕರೆ ನೀಡಿದ್ದಾರೆ. ಆದರೆ, ಈಗಿನ ಕಾಲದಲ್ಲಿ ನಾವು ಅಲ್ಪಮಾನವರಾಗುತ್ತಿದ್ದೇವೆ. ಮತ್ತೆ ನಾವು ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕಾಗಿದೆ ಎಂದು ಹೇಳಿದರು.

ಇದಾದ ಬಳಿಕ ಕವಿರತ್ನ, ಚಿತ್ರ ಸಾಹಿತಿ ಡಾಕ್ಟರ್ ವಿ.ನಾಗೇಂದ್ರಪ್ರಸಾದ್ ರವರು ಕುವೆಂಪು ಹಾಗೂ ಅವರ ಜೀವನದ ಕುರಿತು ಉಪನ್ಯಾಸ ನೀಡಿದ್ದರು. ಸಮಾಜದಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಲು ಕುವೆಂಪು ಸಾಹಿತ್ಯವನ್ನು ಅನುಸರಿಸಬೇಕು. ಮನೆ ಮನೆಗೂ ಕುವೆಂಪು ಸಾಹಿತ್ಯ, ವಿಚಾರಧಾರೆಗಳು ತಲುಪುವಂತಾಗಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇನ್ನೂ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕುವೆಂಪು ಬಾಲ್ಯ, ಜೀವನ, ಸಾಧನೆ ಸೇರಿದಂತೆ ಕುವೆಂಪು ಇಡೀ ಜಗತ್ತಿಗೆ ಸಾಹಿತ್ಯದ ಮೂಲಕ ಕೊಟ್ಟ ಕೊಡುಗೆಯನ್ನು ವಿವರಿಸಿದ್ದರು. ಕುವೆಂಪು ಬಾಲ್ಯ ಜೀವನವನ್ನು ಸ್ವಾಮೀಜಿ ಅವರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದು ವಿಶೇಷ. ವಿದ್ಯಾರ್ಥಿಜೀವನದಲ್ಲಿ ಮೈಸೂರಿನಲ್ಲಿದ್ದ ಕುವೆಂಪು ಎಷ್ಟು ಪ್ರತಿಭಾವಂತರಾಗಿದ್ದರು ಎನ್ನುವುದನ್ನು ಘಟನೆಗಳ ಉದಾಹರಣೆ ಸಹಿತ ವಿವರಿಸಿದ್ದರು,

ಒಳ್ಳೆಯ ಸಾಹಿತ್ಯವನ್ನು ಓದುವ ಮೂಲಕ ಉತ್ತಮ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ನಿರ್ಮಲಾನಂಥ ನಾಥ ಸ್ವಾಮೀಜಿ ಮನವರಿಕೆ ಮಾಡಿದ್ದರು.

ಶತಮಾನದಲ್ಲಿ ಸಾಧಿಸಲಾಗದ್ದನ್ನು ದಶಕದಲ್ಲಿ ಸಾಧಿಸಿದವರು ಕುವೆಂಪು. ರೈತರನ್ನು ನೇಗಿಲಯೋಗಿ ಎಂದು ಜನಸಾಮಾನ್ಯರನ್ನು ಶ್ರೀಸಾಮಾನ್ಯ ಎಂದು ಹೇಳುವ ಮೂಲಕ ರೈತರು, ಸಾಮಾನ್ಯ ಜನರಿಗೂ ಗೌರವ ನೀಡಿದವರು ಕುವೆಂಪು.

ಕುವೆಂಪುರವರ ವಿಶ್ವಮಾನವ ತತ್ವಪ್ರನಾಳಿಕೆ ಸಪ್ತಸೂತ್ರ, ಪಂಚಮಂತ್ರ, ಮಂತ್ರಮಾಂಗಲ್ಯ ಇವು ಯುವ ಪೀಳಿಗೆಗೆ ಆದರ್ಶಪ್ರಾಯ.

ಅನಂತ ತಾನು ಅನಂತವಾಗಿ

ಆಗುತ್ತಿಹನೇ ನಿತ್ಯಯೋಗಿ;

ಅನಂತ ನೀ ಅನಂತನಾಗು;

ಆಗು, ಆಗು, ಆಗು, ಆಗು;

ಓ ನನ್ನ ಚೇತನ

ಆಗು ನೀ ಅನಿಕೇತನ........