ಕನ್ನಡ ರಾಜ್ಯೋತ್ಸವ ಸಮಾರಂಭ

ಕನ್ನಡ ರಾಜ್ಯೋತ್ಸವ ಸಮಾರಂಭ

ಕನ್ನಡ- ಕರ್ನಾಟಕವೆಂದರೆ, ಕೇವಲ ಒಂದು ಭಾಷಿಕ ಕುಲವೋ, ಒಂದು ಭೌಗೋಳಿಕ ಚಹರೆಯೋ ಅಲ್ಲ; ಅದೊಂದು ಭಾವಕೋಶ; ಹರಿವ ನದಿಯ ನಿನಾದ; ಭೇದವಿಲ್ಲದ ನೆಲದ ಜೀವಗಂಧ. ಕನ್ನಡ- ಕರ್ನಾಟಕವೆಂದರೆ, ಸ್ವಾಭಿಮಾನದ ನಿಷ್ಕಲ್ಮಶ ಪ್ರೇಮ ಕಲಶ. ಕನ್ನಡ- ಕರ್ನಾಟಕವೆಂದರೆ, ಎದೆಎದೆಗಳಲ್ಲಿ ಹಚ್ಚಿಟ್ಟ ಹಣತೆ. ಇಂಥಾ ಕನ್ನಡವನ್ನು, ಕರ್ನಾಟಕದ ಹಿರಿತನವನ್ನೂ ಮೈದುಂಬಿಕೊಳ್ಳಲು ನಮಗೆಲ್ಲಾ ಸಿಕ್ಕಿರುವ ಮಹತ್ತರವಾದ ಅವಕಾಶವೆಂದರೆ ಅದು ನವೆಂಬರ್ 1.
 ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಗಳ ದಿವ್ಯ ಆಶೀರ್ವಾದಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು

ದಿನಾಂಕ 01.11.2019 ರಂದು ನಮ್ಮ ಕಾಲೇಜಿನಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವವನ್ನು              ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚರಣ್‌ಕುಮಾರ್.ಎಸ್.ಕೆ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಕನ್ನಡದ ಆತ್ಮಜ್ಞಾನವನ್ನೂ, ಕರ್ನಾಟಕದ ಹಿರಿಮೆಯನ್ನೂ ನೆನದು ಆನಂದಾಭಿಮಾನಗಳಲ್ಲಿ ಮಿಂದೇಳುವ ಶುಭ ಘಳಿಗೆ ಇದಾಗಿತ್ತು. ಕನ್ನಡದ ಕಂಪನ್ನು ಪ್ರಪಂಚದೆಲ್ಲೆಡೆ ಹರಡಿದ ರಸ ಋಷಿ ಕುವೆಂಪು ಅವರು ಬರೆದಿರುವ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಹಾಡುವ ಮೂಲಕ ಪ್ರಾರಂಭವಾದ ಸಮಾರಂಭವನ್ನು ವಿದ್ಯಾರ್ಥಿಗಳೇ ನಡೆಸಿಕೊಟ್ಟದ್ದು ವಿಶೇಷವಾಗಿತ್ತು.

ಇದಾದ ನಂತರ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ನಾಂದಿ ಹಾಡಿದರು. ವಿದ್ಯಾರ್ಥಿನಿ ಅನನ್ಯ ಡಿ.ಐ, ಕಾರ್ಯಕ್ರಮಕ್ಕೆ ಸಾಕ್ಷಿಯಾದ ಹಿರಿಯರನ್ನೂ, ವಿದ್ಯಾರ್ಥಿ ಸಮೂಹವನ್ನೂ ತನ್ನ ಮೃದುಲವಾದ ಸವಿಗನ್ನಡದಿಂದ ಸ್ವಾಗತಿಸಿದಳು.

ಪ್ರಾಂಶುಪಾಲರು ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರೊಂದಿಗೆ ಕೂಡಿ ಕನ್ನಡದ ದೀಪ ಬೆಳಗಿ ಉದ್ಘಾಟಿಸಿದರು. ವಿದ್ಯಾರ್ಥಿನಿ ಶೃತಿ.ಎಚ್.ಎಸ್, ಕರ್ನಾಟಕ ರಾಜ್ಯೋತ್ಸವ ಕುರಿತು ಮಾತನಾಡಿದಳು. ಮಹತ್ವ ಪೂರ್ಣವಾದ ಮತ್ತು ಮಾಹಿತಿಯುಕ್ತವಾದ ಅವಳ ಮಾತುಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಮತ್ತು ಕನ್ನಡನಾಡನ್ನೂ, ನುಡಿಯನ್ನೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ, ಅದಕ್ಕಾಗಿ ಯುವಜನರು ಎದೆಯೊಡ್ಡಿ ನಿಲ್ಲಬೇಕಾದ ಔಚಿತ್ಯ.. ಎಲ್ಲವೂ ನಿಷ್ಕಲ್ಮಶ ಕನ್ನಡಾಭಿಮಾನದಿಂದ ನಿರೂಪಿಸಲ್ಪಟ್ಟವು. ಅವಳ ಮಾತುಗಳಿಗೆ ಸಮಾರಂಭದಲ್ಲಿ ಹಾಜರಿದ್ದ ಹಿರಿಯರು ಕಿರಿಯರೆಲ್ಲಾ ತಲೆದೂಗಿದರು.

ಕರ್ನಾಟಕ ರಾಜ್ಯೋತ್ಸವ ಕುರಿತು ಮಾತನಾಡಿದ ಪ್ರಾಂಶುಪಾಲರು, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಾಡು- ನುಡಿ ಕುರಿತ ಆಲೋಚನೆಗಳು ಅವುಗಳೊಂದಿಗೆ ನಡೆಯುವ ಸಮಾಜಬಂಧುಗಳಿಂದ ಹೇಗೆ ಔನ್ನತ್ಯಕ್ಕೇರಬೇಕು ಎಂಬುದನ್ನು ಉದಾಹರಣೆಗಳ ಸಮೇತ ವಿವರಿಸಿದರು. ಯುವಜನರ ಶ್ರಮ ಅವರು ಬಾಳಿ ಬದುಕುವ ನೆಲವನ್ನು ಹೇಗೆ ಉನ್ನತ ಮಟ್ಟಕ್ಕೆ ಏರಿಸುತ್ತದೆ ಎಂಬುದನ್ನು ಅರ್ಥ ಮಾಡಿಸಿದರು. ವಿದ್ಯಾರ್ಥಿಗಳ ವಯೋಸಹಜ ಸಮಸ್ಯೆಗಳು, ಅವುಗಳನ್ನು ಮೀರಿ ನಡೆದು ಸೇರಬೇಕಾದ ಗುರಿ, ಅದಕ್ಕಾಗಿ ಪಾಠ, ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾದ ಅಗತ್ಯತೆ.. ಹೀಗೆ ಅವರ ನುಡಿಗಳು ಮುಂದೆ ಕುಳಿತು ಕಿವಿತುಂಬಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಹೃದಯಗಳಲ್ಲಿ ಅರಿವಿನ ದೀಪ ಹಚ್ಚಿದವು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿರಿಯ ಉಪನ್ಯಾಸಕರೂ, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರೂ ಆದ ಶ್ರೀ ಬಿ.ಆರ್.ಶಿವನಂಜಯ್ಯನವರು ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯಗಳ, ಮಹಾನ್ ವ್ಯಕ್ತಿಗಳ ಕೊಡುಗೆ, ನಾಡು ನುಡಿಯನ್ನು ಫಣತೊಟ್ಟು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲವನ್ನೂ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಮಂಡಿಸಿದರು. ಅವರ ಜ್ಞಾನದ ಮಾತುಗಳಿಗೆ ವಿದ್ಯಾರ್ಥಿಗಳು ತಲೆದೂಗಿದರು.

ಈ ಎಲ್ಲಾ ಅರಿವಿನೋಗರಗಳ ನಡುವೆ ಮಕ್ಕಳೇ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದಲ್ಲದೆ, ಅವರ ನರ ನಾಡಿಗಳಲ್ಲಿ ಕನ್ನಡದ ಬುದ್ಧಿ - ಭಾವಗಳ ವಿದ್ಯುದಾಲಿಂಗನವಾಗಿ ಕಾಲೇಜಿನ ಕನ್ನಡ ಪ್ರೇಮಕ್ಕೆ ಸಾಕ್ಷಿಯಾದರು. ಉಪನ್ಯಾಸಕರೇ ಸೇರಿ ಸಿದ್ಧಪಡಿಸಿದ್ದ ನಾಡು ನುಡಿಯ ಬಗೆಗಿನ ವಿಡಿಯೋ ಪ್ರದರ್ಶನ ಮಕ್ಕಳ ಗಮನ ಸೆಳೆಯಿತು. ಆಲೂರು ವೆಂಕಟರಾಯರ ನೇತೃತ್ವದಲ್ಲಿ ನಡೆದ ಏಕೀಕರಣ ಚಳವಳಿ ಕುರಿತ ಚಿತ್ರಿಕೆಗಳನ್ನು, ಕನ್ನಡಾಭಿಮಾನ ಮೂಡಿಸುವ ವಿಡಿಯೋ ತುಣುಕುಗಳನ್ನು ಕೂಡಿಸಿ ಈ ಪ್ರದರ್ಶನ ಸಿದ್ಧಪಡಿಸಲಾಗಿತ್ತು. ಈ ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ಕನ್ನಡನಾಡಿನ ಭಾಷಾ ಹೋರಾಟದ ಬಗೆಗಿನ ಗೌರವ ಹೆಚ್ಚಿತು. ದ್ವಿತೀಯ ಪಿಯುಸಿಯ ಹಿಮ ಮತ್ತು ತಂಡ ಕನ್ನಡ ನಾಡು- ನುಡಿಯ ಬಗ್ಗೆ ಅಭಿಮಾನ ಸೂಚಿಸುವ ನೃತ್ಯ ಮಾಡಿ ರಂಜಿಸಿದರೆ, ಶ್ರೇಯಾ ಮತ್ತು ಯಶಸ್ವಿನಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿನ ಮೂಲಕ ಮಕ್ಕಳನ್ನು ರೋಮಾಂಚನಗೊಳಿಸಿದರು. ವಿದ್ಯಾ ಮತ್ತು ತಂಡವದರು ಕನ್ನಡ ಧ್ವಜದ ಮಾಹಿತಿ ಹಾಗೂ ಅನನ್ಯತೆಯನ್ನು ಸಾರುವ ಕಿರು ನಾಟಕವನ್ನು ಅಭಿನಯಿಸಿ ಪ್ರೌಢತೆ ಮೆರೆದರೆ, ಸೃಜನ್ ಮತ್ತು ತಂಡವದರು ನೃತ್ಯದ ಮೂಲಕ ರಂಜಿಸಿದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರು ಮತ್ತು ಎ.ಸಿ.ಒ ಶ್ರೀಮತಿ ಮೀನಾಕ್ಷಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು  ಶ್ರೀ ಮುತ್ತುರಾಜ್ ಅವರು ಹಾಗೂ ಪಿ.ಆರ್.ಒ ಶ್ರೀ ವಿಶ್ವನಾಥ್ ಬಿ.ಹೆಚ್ ಅವರು  ಒಳಗೊಂಡಂತೆ ಎಲ್ಲಾ ಉಪನ್ಯಾಸಕರು ಹಾಜರಿದ್ದ ಸಮಾರಂಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರಕೃತಿ ವಂದನಾರ್ಪಣೆ ಮಾಡಿದಳು. ವಿದ್ಯಾರ್ಥಿನಿ ನಿಸರ್ಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು.

ರಾಷ್ಟ್ರಗೀತೆ ಹಾಡುವ ಮೂಲಕ ಸಮಾರಂಭಕ್ಕೆ ತೆರೆ ಎಳೆಯುವ ಹೊತ್ತಿಗೆ ವಿದ್ಯಾರ್ಥಿಗಳ ಮನಸ್ಸುಗಳು ಕನ್ನಡ- ಕರ್ನಾಟಕದಲ್ಲಿ ಹುಟ್ಟಿ ಬದುಕುತ್ತಿರುವುದಕ್ಕೆ ಉಲ್ಲಸಿತಗೊಂತೆ ಕಾಣುತ್ತಿದ್ದವು..

 

ಅಶ್ವಿನಿ ಆರ್,ಆರ್

ಕನ್ನಡ ಭಾಷಾ ಉಪನ್ಯಾಸಕಿ