ಭೇಷ್ ಬೆಂಗಳೂರಿಗರೇ

ಭೇಷ್ ಬೆಂಗಳೂರಿಗರೇ

ಭೇಷ್! ಬೆಂಗಳೂರಿಗರೇ

  • ಬೆಂಗಳೂರು ಎಂದರೆ ಎಷ್ಟೋ ಜನರಿಗೆ ಅದೊಂದು ಐ ಟಿ ಹಬ್ ಅಥವಾ ತನ್ನ ವರ್ಣರಂಜಿತ ಜಗತ್ತಿನ ಮೂಲಕ ಜಗದೆಲ್ಲೆಡೆಯಿಂದ ಜನರನ್ನು ಆಕರ್ಷಿಸುವ ತಾಣವಷ್ಟೆ ಎಂದು ನೆನಪಾಗಬಹುದು .
  •  ಆದರೆ , ಕನ್ನಡಿಗರಾದವರು , ಬೆಂಗಳೂರಿನಿಂದ ತಮ್ಮ ಜೀವನದ ದಿಕ್ಕನ್ನು ಊರ್ಧ್ವಮುಖಗೊಳಿಸಿಕೊಂಡವರು ಇಂದು ಒಂದಷ್ಟು ಗಮನ ಹರಿಸಿ ಈ ಸರ್ವಜನಾಂಗದ ಶಾಂತಿಯ ತೋಟದ ಉಳಿವಿಗಾಗಿ ತಮಗಿರುವ ಅತ್ಯಮೂಲ್ಯವಾದ ಸಮಯದ ಒಂದಷ್ಟು ಭಾಗವನ್ನು ತೆಗೆದಿಡುವ ಅವಶ್ಯಕತೆಯಿದೆ . ಭಾರತದ ತುಂಬೆಲ್ಲ ಸಾಕಷ್ಟು ಮೆಟ್ರೋ ಪಾಲಿಟನ್ ನಗರಗಳಿರಬಹುದು . ಆದರೆ ಬೆಂಗಳೂರಿನ  ಭವ್ಯ ಇತಿಹಾಸವಿರುವ , ದಂತಕಥೆಗಳಿರುವ ಜಾಗತಿಕ ಒಪ್ಪಿಕೊಳ್ಳುವಿಕೆ ಇರುವ ಮತ್ತೊಂದು ನಗರ ಇರಲಾರದೆಂಬುದು ನನ್ನ ಅಭಿಪ್ರಾಯ ನಮ್ಮ ಪ್ರತಿಭೆಗೆ ತಕ್ಕ ಅವಕಾಶಗಳನ್ನು ಅನಂತವಾಗಿ ತೆರೆದಿಟ್ಟ ಈ ಮಹಾನಗರದ ಉಳಿವಿಗಾಗಿ ಒಂದಷ್ಟು ಯೋಜಿಸುವ ಬನ್ನಿ

 

ನಾಡಪ್ರಭು ಕೆಂಪೇಗೌಡರು ಕಂಡ ಒಂದು ದಿವ್ಯ ಕನಸು. ಬೆಂಗಳೂರೆಂಬ ಮಹಾನಗರ ನಾಲ್ಕು ದಿಕ್ಕಿಗೆ ಬೆಳೆಯಲು ಅಚ್ಚುಕಟ್ಟಾದ ಯೋಜನೆಯನ್ನು ರೂಪಿಸಿದರು .ಒಂದು ಮಹಾನಗರವೆಂದ ಮೇಲೆ ಅಲ್ಲಿ ಜಗತ್ತಿನ ಸರ್ವಶ್ರೇಷ್ಠ ಜ್ಞಾನವೆಲ್ಲಾ ಒಂದುಗೂಡಿರ ಬೇಕೆಂದು, ಸುಮಾರು ಅರವತ್ನಾಲ್ಕು ವಿದ್ಯೆಯಲ್ಲಿ ಪಾರಂಗತರಾದವರನ್ನು ಬೆಂಗಳೂರಿಗೆ ಕರೆತಂದು ತಮ್ಮ ಕನಸಿನ ಕುಡಿಯಾಗಿ ಬೆಳೆಸಿದರು. ಆದರೆ, ನಮ್ಮ ಕೆಂಪೇಗೌಡರಿಗೆ ಅಭಿವೃದ್ಧಿ ಎಂದರೆ ಆಕರ್ಷಕ ಕಟ್ಟಡಗಳ ನಿರ್ಮಾಣ ಮನುಷ್ಯನ ಸ್ವಾರ್ಥ ಪೂರಿತ ಲೋಲುಪತೆಗಳಿಗೆ , ದುರುದ್ಧೇಶಗಳಿಗೆ ಮಾತ್ರ ಮಾಡುವುದು ಎಂಬ ಭ್ರಮೆಯಲ್ಲಿರಲಿಲ್ಲ, ಆದ ಕಾರಣವೇ, ಬೆಂಗಳೂರಿನಾದ್ಯಂತ ಕೆರೆಗಳನ್ನು ನಿರ್ಮಿಸಿ ಬೆಂಗಳೂರನ್ನು ಸಾವಿರ ಕೆರೆಗಳ ನಾಡನ್ನಾಗಿಸಿ ಜನರ ಮೂಲ ಸೌಲ್ಯಭ್ಯಗಳಿಗೂ ಅಷ್ಟೇ ಗಮನ ನೀಡಿದ್ದರು. ಆದರೆ , ವಿಚಾರವಾದಿಗಳು, ಬುದ್ಧಿಜೀವಿಗಳು , ಹಾಗೂ ಸ್ವಯಂಘೋಷಿತ ತಜ್ಞರ ಕೃಪೆಯಿಂದ ಬೆಂಗಳೂರಿನಲ್ಲಿ ನೀರನ್ನು ಕೊಂಡು ಕೊಳ್ಳುವ ದೈನೇಸಿ ಪರಿಸ್ಥಿತಿ ಬಂದಿದೆ. ಬೆಂಗಳೂರಿನಲ್ಲಿ ಅಂದಿದ್ದ ಕೆರೆಗಳನ್ನು ಉಳಿಸಿಕೊಂಡಿದ್ದರೆ ಸಮೃದ್ಧವಾದ ನೀರನ್ನು ವರ್ಷದ ಎಲ್ಲ ಕಾಲದಲ್ಲೂ ಪಡೆಯುವ ಭಾಗ್ಯವನ್ನು ನಾವು ಕಳೆದುಕೊಂಡಿದ್ದೇವೆ. ಬೆಂಗಳೂರಿನ ಬಗ್ಗೆ ಅತ್ಯಲ್ಪ ಜ್ಞಾನವಿರುವ ಎಲ್ಲರಿಗೂ ನಮ್ಮ ಅತಿ ಪುರಾತನ ಮತ್ತು ಪ್ರಸಿದ್ಧ ಕೆರೆಗಳಾದ ಧರ್ಮಾಂಭೂದಿ ಮತ್ತು ಕೆಂಪಾಂಭೂದಿ ಕೆರೆಗಳು ಗೊತ್ತಿರಬಹುದು. ಧರ್ಮಾಂಭೂದಿ ಕೆರೆ ಇಂದು ನಮ್ಮಲ್ಲರ ಕಣ್ಣ ಮುಂದೆ ಮೆಜಸ್ಟಿಕ್ ನ ಬೃಹತ್ ಬಸ್ ನಿಲ್ದಾಣವಾದರೆ, ಕೆಂಪೇಗೌಡರು ತಮ್ಮ ತಾಯಿಯ ನೆನಪಿನಲ್ಲಿ ಕಟ್ಟಿದ್ದ ಕಂಪಂಭೂದಿ ಕೆರೆ . ಅಲ್ಪಮಟ್ಟಿಗೆ ಉಳಿದುಕೊಂಡು ಹಲವಾರು ಜನರ ವಾಕಿಂಗ್ ಟ್ರಾಕ್ ಆಗಿದೆ. ಬೆಂಗಳೂರಿಗೆ ಎಷ್ಟೇ ಸಾಫ್ಟ್ ವೇರ್ ಕಂಪನಿಗಳೇ ಬಂದರು, ಎಷ್ಟೇ ಸ್ಟಾರ್ಟ್ ಆಪ್ಗಳು ಶುರುವಾದರು ಬೆಂಗಳೂರಿನ ಆತ್ಮ ಎಂದಿಗೂ ಅದರ ಪ್ರಾಕೃತಿಕ ಸೌಂದರ್ಯ ಎಂಬುದರಲ್ಲಿ ಸಂಶಯವಿಲ್ಲ. ಹೀಗೆ,  ಬೆಂಗಳೂರಿನ ಸುತ್ತಲಿದ್ದ ನೂರಾರು ಕೆರೆಗಳನ್ನು ಅಭಿವೃದ್ಧಿ ಯ ಹೆಸರಿನಲ್ಲಿ ನುಂಗಿ ನೀರು ಕುಡಿದ ನಮ್ಮೆಲ್ಲರ ಪಾಪದ ಹೊರೆಯನ್ನು ಹೊರುವಂತೆ ಈ ಬೇಸಿಗೆ ಮಾಡುತ್ತಿದ್ದೆ. ಇನ್ನೂ ಆಶ್ಚರ್ಯಕರವಾದ ಅಂಶವೇನೆಂದರೆ ಬೆಂಗಳೂರಿನಲ್ಲಿ ಕೇವಲ ಕರೆಗಳಲ್ಲ, ಒಂದು ಬೃಹತ್ ನದಿಯೇ ಹರಿಯುತ್ತಿತ್ತೆಂಬುದನ್ನು ನಾವೆಲ್ಲರೂ ಮರೆತಿದ್ದೇವೆ. ಬಸವನಗುಡಿಯ ವೃಷಭ (ನಂದಿ ) ವಿಗ್ರಹದ ಅಡಿಯಿಂದ ಹುಟ್ಟಿ ಕನಕಪುರದ ವರೆಗೂ ಹರಿಯುತ್ತಿತ್ತೆಂದು ನಂಬುವುದೂ ಅಸಾಧ್ಯ ಆ ನದಿಯೇ ವೃಷಭಾವತಿ ನದಿ. ಈ ವೃಷ್ಭವತಿ ನದಿಯೇ ಬೆಂಗಳೂರಿನ ಎಲ್ಲಾ ಕೆರೆಗಳಿಗೂ ಜಲಮೂಲ , ಬೆಂಗಳೂರಿಗರ ದೈನಂದಿನ ಕಾರ್ಯಗಳಿಗೆ ಜೀವನಾಡಿ , ಅಷ್ಟೇ ಅಲ್ಲದೆ ಜಗತ್ತಿಸಿದ್ಧ ಗಾಳಿ ಆಂಜನೇಯ ಸ್ವಾಮಿಗೆ ಅಭಿಷೇಕವಾಗುತ್ತಿದ್ದ ಪುಣ್ಯ ಜಲವೂ ಆಗಿತ್ತು. ಈ ನದಿಯ ನೀರಲ್ಲಿ, ಬೆಂಗಳೂರಿನ ಜನರು ಸೇಬು ಬೆಳೆಯುತ್ತಿದ್ದರೆಂಬ ದಂತ ಕಥೆಯೂ ಇದೆ. ಇಂತಹ ವೃಷಭಾವತಿ ಇದ್ದಿದ್ದರೆ, ಇಂದು ನಾವು ರೈತರಿಗೆ ಅವಶ್ಯವಾಗಿರುವ ಕಾವೇರಿಯನ್ನು ಕಿತ್ತುಕೊಳ್ಳುವ ಪರಿಸ್ಥಿತಿ ಖಂಡಿತ ಇರುತ್ತಿರಲಿಲ್ಲ. ಹಾಗಾದರೆ, ಈ ವೃಷಭಾವತಿ ಎಲ್ಲಿ ಹೋದಳು? ಈ ಪ್ರಶ್ನೆಯನ್ನು ಬೆಂಗಳೂರಿನ ಜಾಗತೀಕರಣದ ಅಭಿವೃದ್ಧಿ ಯ ಹರಿಕಾರರನ್ನು ಕೇಳಬೇಕು. ಏಕೆಂದರೆ ಈ ಮಹಾಪುರುಷರೇ ಅಲ್ಲವೇ ಎಲ್ಲ ಕೈಗಾರಿಕಾ ತ್ಯಾಜ್ಯವನ್ನು ಈ ನದಿಗೆ ಸೇರಿಸಿ, ಈ ಪವಿತ್ರ ವೃಷಭಾವತಯನ್ನು , ಜನ ದುರ್ವಾಸನೆ ತಡೆಯಲಾರದೆ ಮೂಗು ಮುಚ್ಚಿ ಕೊಳ್ಳುವ ಕೆಂಗೇರಿ ಮೋರಿ ಯನ್ನಾಗಿಸುವ ಮಹತ್ಕಾರ್ಯವನ್ನು ಸಫಲವಾಗಿ ನೆರವೇರಿಸಿದವರು.  ಹೌದು, ಇವತ್ತು ಆ ತಾಯಿ ವೃಷಭಾವತಿ ಇದ್ದಿದ್ದರೆ ಲಂಡನ್ ನ ಥೇಮ್ಸ್ ನಂತೆ ಅಸಮದಾಬಾದಿನ ಸಬರಮತಿ ನದಿಯಂತೆ ನಗರದ ಮಧ್ಯದಲ್ಲಿ ಹರಿದು ಬೆಂಗಳೂರನ್ನು ಇನ್ನಷ್ಟು ಸೊಬಗು ಗೊಳಿಸುತ್ತಿತ್ತು. ಈ ಪಾಪವನ್ನು ಪ್ರಾಯಶ್ಚಿತ್ತ ಮಾಡಿಕೊಂಡು ಪುನಃ ಇದನ್ನು ಸ್ವಚ್ಛಗೊಳಿಸುವ ವಿಷಯವಾಗಿ ಸಾಕಷ್ಟು ವರದಿಗಳು ಆಂದೋಲನಗಳು ನಡೆದರೂ ಯಾವು ಫಲಿಸಿಲ್ಲ. ಕಡೆಯ ಪಕ್ಷ ಬೆಂಗಳೂರಿನ ಯುವಕರಾದವರೆಲ್ಲರೂ ತಮ್ಮ ಕೈಲಾದಷ್ಟು ಬೆಂಗಳೂರಿನ ಕ್ಷೇಮದ ಬಗ್ಗೆ ಯೋಚಿಸಿ, ಕೇವಲ ಮಾರ್ಕ್ಸ್ ಕಾರ್ಡಿನಲ್ಲಿ , ಮಹಲುಗಳಲ್ಲಷ್ಟೇ ವಿದ್ಯಾವಂತರಾಗಿರದೆ, ತಮ್ಮ ನಡವಳಿಕೆಯಲ್ಲೂ , ಸಾರ್ವಜನಿಕ ಜವಾಬ್ದಾರಿಗಳಲ್ಲೂ ವಿದ್ಯಾವಂತಿಕೆಯನ್ನು ಮೆರೆದು ಇದ್ದುದ್ದನ್ನು ಉಳಿಸಿಕೊಂಡು ಹೋಗಲು ಮನಸ್ಸು ಮಾಡುವುದು ಅತ್ಯಾವಶ್ಯಕವಾಗಿದೆ. ಇಲ್ಲದೇ ಹೋದರೆ ಕೆಂಪೇಗೌಡ ರ ಕನಸಿನ ಕೂಸಾದ ನಮ್ಮ ಬೆಂಗಳೂರು ಅವನತಿಯತ್ತ ಸಾಗುವ ದುರಂತದ ದಿನಗಳು ದೂರವಿಲ್ಲ. ಅಂತಹ ದಿನ ಎಂದಿಗೂ ಬಾರದಿರಲೆಂದು ಪ್ರಾರ್ಥಿಸುವೆ.

Yashwanth B S